U19 World Cup 2026: 6ನೇ ಬಾರಿ ವಿಶ್ವಕಪ್ ಎತ್ತಿದ ಭಾರತ

ಭಾರತ ಅಂಡರ್-19 ತಂಡ ಐತಿಹಾಸಿಕ ಗೆಲುವು ಸಾಧಿಸಿದೆ. ಜಿಂಬಾಬ್ವೆಯ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಭಾರತ ಬಗ್ಗು ಬಡಿದಿದೆ. ಈ ಮೂಲಕ ಯಂಗ್ ಟೀಮ್ ಇಂಡಿಯಾ 6ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಈ ಐತಿಹಾಸಿಕ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ 175 ರನ್‌ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದರು.

ವೈಭವ್ ಸೂರ್ಯವಂಶಿ ಅವರ ಸ್ಪೋಟಕ ಇನ್ನಿಂಗ್ಸ್ ನೆರವಿನಿಂದ ಭಾರತ ತಂಡ ದಾಖಲೆಯ ಮೊತ್ತವನ್ನು ಕಲೆ ಹಾಕಿತ್ತು. ಭಾರತ ತಂಡ ನಿಗದಿತ 50 ಓವರ್​​ಗಳಲ್ಲಿ 9 ವಿಕೆಟ್ ಕಳೆದುಕೊಂಡು 411 ರನ್ ಪೇರಿಸಿತು. ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ಟೀಮ್ ಇಂಡಿಯಾ ಬೌಲರ್​ಗಳ ದಾಳಿಗೆ ಸರ್ವಪತನವಾಯಿತು. ಇಂಗ್ಲೆಂಡ್ 40.2 ಓವರ್​​ಗಳಲ್ಲಿ 311 ರನ್​ಗಳಿಗೆ ಆಲೌಟಾಯಿತು.

ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ ಆರನ್ ಜಾರ್ಜ್ (9) ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡತ್ತು. ಈ ಹಂತದಲ್ಲಿ ಭಾರತ ಕೇವಲ 20 ರನ್‌ಗಳಿಸಿತ್ತು. ನಂತರ ವೈಭವ್ ಸೂರ್ಯವಂಶಿ ಮತ್ತು ನಾಯಕ ಆಯುಷ್ ಮ್ಹಾತ್ರೆ ಎರಡನೇ ವಿಕೆಟ್‌ಗೆ 142 ರನ್‌ಗಳ ಜೊತೆಯಾಟವಾಡಿ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದರು. ಮ್ಹಾತ್ರೆ 51 ಎಸೆತಗಳಲ್ಲಿ 53 ರನ್ ಗಳಿಸಿ ಔಟಾದರು. ನಂತರ ಸೂರ್ಯವಂಶಿ ವೇದಾಂತ್ ತ್ರಿವೇದಿ ಅವರೊಂದಿಗೆ ಮೂರನೇ ವಿಕೆಟ್‌ಗೆ 39 ಎಸೆತಗಳಲ್ಲಿ 89 ರನ್ ಸೇರಿಸಿ ಭಾರತವನ್ನು 251 ರನ್‌ಗಳ ಗಡಿ ದಾಟಿಸಿದರು.

ವೈಭವ್ 80 ಎಸೆತಗಳಲ್ಲಿ 15 ಬೌಂಡರಿಗಳು ಮತ್ತು ಅಷ್ಟೇ ಸಿಕ್ಸರ್‌ಗಳೊಂದಿಗೆ 175 ರನ್ ಗಳಿಸಿ ನಿರ್ಗಮಿಸಿದರು. ನಂತರ ವೇದಾಂತ್ ತ್ರಿವೇದಿ ಅವರೊಂದಿಗೆ ವಿಹಾನ್ ಮಲ್ಹೋತ್ರಾ 51 ರನ್ ಗಳಿಸಿ ತಂಡವನ್ನು 300 ಗಡಿ ದಾಟಿಸಿದರು. ವಿಹಾನ್ 30 ರನ್ ಗಳಿಸಿ ಔಟಾದರು, ನಂತರ ಅಭಿಗ್ಯಾನ್ ಕುಂಡು 31 ಎಸೆತಗಳಲ್ಲಿ 40 ರನ್ ಗಳಿಸಿದರು. ಕನಿಷ್ಕ್ ಚೌಹಾಣ್ ಅಂತಿಮ ಓವರ್‌ಗಳಲ್ಲಿ ಅಜೇಯ 37 ರನ್ ಗಳಿಸಿ ಭಾರತವನ್ನು 411 ಸ್ಕೋರ್​ಗೆ ತಲುಪಿಸಿದರು.

ಇಂಗ್ಲೆಂಡ್ ತಂಡದ ಪರ ಜೇಮ್ಸ್ ಮಿಂಟೊ ಮೂರು ವಿಕೆಟ್‌ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದರೆ, ಸೆಬಾಸ್ಟಿಯನ್ ಮಾರ್ಗನ್ ಮತ್ತು ಅಲೆಕ್ಸ್ ಗ್ರೀನ್ ತಲಾ ಎರಡು ವಿಕೆಟ್ ಪಡೆದರು. ಮ್ಯಾನಿ ಲುಮ್ಸ್‌ಡೆನ್ ಒಂದು ವಿಕೆಟ್ ಪಡೆದರು.

ಭಾರತ ನೀಡಿದ 412 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ 40.2 ಓವರ್‌ಗಳಲ್ಲಿ 311 ರನ್‌ಗಳಿಗೆ ಆಲೌಟ್ ಆಯಿತು. 19 ರನ್‌ಗಳಿಗೆ ಜೋಸೆಫ್ ಮೂರ್ಸ್ (17) ವಿಕೆಟ್ ಕಳೆದುಕೊಂಡಿತು. ಅಲ್ಲಿಂದ ಬೆನ್ ಡಾಕಿನ್ಸ್ ತಂಡವನ್ನು ಸ್ಥಿರಗೊಳಿಸಲು ಪ್ರಯತ್ನಿಸಿದರು. ಬೆನ್ ಮೇಯಸ್ ಅವರೊಂದಿಗೆ ಎರಡನೇ ವಿಕೆಟ್‌ಗೆ 74 ರನ್‌ಗಳ ಜೊತೆಯಾಟ ನಡೆಸಿದರು. ಮೇಯಸ್ 28 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಏಳು ಬೌಂಡರಿಗಳೊಂದಿಗೆ 45 ರನ್ ಗಳಿಸಿದ ನಂತರ ನಿರ್ಗಮಿಸಿದರು.

ನಂತರ ಡಾಕಿನ್ಸ್ ಥಾಮಸ್ ರೀವ್ಸ್ ಅವರೊಂದಿಗೆ ಮೂರನೇ ವಿಕೆಟ್‌ಗೆ 49 ರನ್ ಮತ್ತು ಕ್ಯಾಲೆಬ್ ಫಾಕ್ನರ್ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 32 ರನ್ ಸೇರಿಸಿದರು. ಕ್ಯಾಲೆಬ್ ಫಾಕ್ನರ್ ಇಂಗ್ಲೆಂಡ್ ಪರ ಶತಕ ಗಳಿಸಿದರು. ಆದರೆ ಇದು ತಂಡದ ಗೆಲುವಿಗೆ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ಫಾಕ್ನರ್ 67 ಎಸೆತಗಳಲ್ಲಿ 115 ರನ್‌ಗಳ ಇನ್ನಿಂಗ್ಸ್ ಆಡಿದರು.

ಭಾರತದ ಪರ ಆರ್.ಎಸ್. ಅಂಬ್ರಿಸ್ ಮೂರು ವಿಕೆಟ್ ಪಡೆದು ಅತಿ ಹೆಚ್ಚು ವಿಕೆಟ್ ಪಡೆದು ಮಿಂಚಿದರು. ದೀಪೇಶ್ ದೇವೇಂದ್ರನ್ ಮತ್ತು ಕನಿಷ್ಕ್ ಚೌಹಾಣ್ ತಲಾ ಎರಡು ವಿಕೆಟ್ ಕಬಳಿಸಿದರು. ನಾಯಕ ಮ್ಹಾತ್ರೆ ಒಂದು ವಿಕೆಟ್ ಪಡೆದರು.

Leave a Reply

Your email address will not be published. Required fields are marked *