ಮಾಜಿ ಸಿಎಂಗಳನ್ನ ಭೇಟಿಯಾಗಿ ಚರ್ಚಿಸಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾಜಿ ಸಿಎಂಗಳನ್ನ ಭೇಟಿಯಾಗಿ ಚರ್ಚೆ ನಡೆಸಿ ಸಲಹೆ ಪಡೆದಿದ್ದಾರೆ.
ಡಿಕೆ ಶಿವಕುಮಾರ್ ಅವರು ರಾಜ್ಯದ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆಗಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಕೊನೆಗೂ ಅದನ್ನು ಪಡೆದುಕೊಳ್ಳುವಲ್ಲಿ ಅವರು ಯಶಸ್ವಿ ಆಗಿದ್ದಾರೆ. ಈ ನಡುವೆ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡುವ ಸಂದರ್ಭದಲ್ಲೂ ಡಿಕೆಶಿ ಭಿನ್ನ ನಡೆಯನ್ನು ಅನುಸರಿಸಿದ್ದರು.
ಮಾಜಿ ಸಿಎಂಗಳಾದ ಜಗದೀಶ್ ಶೆಟ್ಟರ್, ಡಿ.ವಿ ಸದಾನಂದಗೌಡ ಅವರನ್ನ ಅವರ ನಿವಾಸದಲ್ಲಿ ಸಿಎಂ ಡಿಕೆ ಶಿವಕುಮಾರ್ ಭೇಟಿಯಾಗಿದ್ದು ಈ ವೇಳೆ ಅವರ ಜೊತೆ ಚರ್ಚಿಸಿ ಸಲಹೆ ಪಡೆದಿದ್ದಾರೆ. ಹಾಗೆಯೇ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರ ನಿವಾಸಕ್ಕೂ ಭೇಟಿ ನೀಡಿದ್ದರು.
ಈ ಮೂಲಕ ಸಿಎಂ ಡಿಕೆ ಶಿವಕುಮಾರ್ ಭಿನ್ನಾಭಿಪ್ರಾಯ ಬದಿಗಿಟ್ಟು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮುನ್ನ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರನ್ನ ಭೇಟಿಯಾಗಿ ಆಶೀರ್ವಾದ ಪಡೆದಿದ್ದರು.
ಸಿಎಂ ಡಿಕೆ ಶಿವಕುಮಾರ್ ಅವರ ಈ ನಡೆಗೆ ಮಾಜಿ ಸಿಎಂ ಡಿವಿ ಸದಾನಂದ ಗೌಡ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ‘ನನಗೆ ತುಂಬಾ ಖುಷಿಯಾಗಿದೆ. ನಾನೂ ಈ ರೀತಿ ಮಾಡಿಲ್ಲ. ಹಿಂದಿನ ಮುಖ್ಯಮಂತ್ರಿಗಳ ಮನೆಗೆ ಹೋಗಿ ಭೇಟಿ ಮಾಡಿ ಸಲಹೆ ಸೂಚನೆ ಪಡೆದುಕೊಳ್ಳುವುದು ಹೊಸ ಸಂಪ್ರದಾಯ. ದ್ವೇಷದ ರಾಜಕೀಯ ಇಂತಹ ಕಾರ್ಯಗಳಿಂದ ಕಡಿಮೆ ಆಗಲಿದೆ. ನನ್ನ ಮನೆಗೆ ಬಂದಾಗ ಗೌರವ ಕೊಟ್ಟು ರಾಜ್ಯದ ಅಭಿವೃದ್ದಿಗೆ ದುಡಿಯಲು ಶಕ್ತಿ ಬರಲಿ ಎಂದು ಪ್ರಾಥಿಸಿದೆ. ರಾಜ್ಯದ ಹಿತದೃಷ್ಟಿಗೆ ಒಳ್ಳೆಯದಾಗಲಿ ಎಂಬ ಭಾವನೆಯಿಂದ ಸಲಹೆ ಸೂಚನೆಗಳನ್ನು ನೀಡಿದ್ದೇನೆ’ ಎಂದರು.

Leave a Reply

Your email address will not be published. Required fields are marked *