ಚನ್ನಪಟ್ಟಣ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಮಾಸ್ತಮ್ಮವಾಣಿ ಪ್ರಾದೇಶಿಕ ಕನ್ನಡ ದಿನಪತ್ರಿಕೆಯ ಸಂಪಾದಕ ಡಿ.ಎಂ.ಮಂಜುನಾಥ್ ಅವರು ಬುಧವಾರ ನಡೆದ ಚುನಾವಣೆಯಲ್ಲಿ 2ನೇ ಭಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಚನ್ನಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಚುನಾವಣೆ ನಡೆಸಲಾಯಿತು. ಒಟ್ಟು 37 ಮತಗಳಲ್ಲಿ 37 ಮತಗಳು ಚಲಾವಣೆಗೊಂಡಿದ್ದು, ಶೇ.100ರಷ್ಟು ಮತದಾನವಾಯಿತು. ಅಧ್ಯಕ್ಷ ಸ್ಥಾನಕ್ಕೆ ಡಿ.ಎಂ. ಮಂಜುನಾಥ್ ಅವರು 25 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದರು.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಅಕ್ಕೂರು ರಮೇಶ್ 25 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದರು. ಕಾರ್ಯದರ್ಶಿ ಸ್ಥಾನಕ್ಕೆ ಚೇತನ್ ಚಕ್ಕರೆ ಹಾಗೂ ವಿಜಯ್ ಕೇಸರಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಎರಡು ಸ್ಥಾನ ಮೀಸಲಾಗಿದ್ದು, ಮೂವರು ಅಭ್ಯರ್ಥಿಗಳು ಆಯ್ಕೆ ಬಯಸಿ ಕಣದಲ್ಲಿದ್ದರು. ಈ ಪೈಕಿ ಅರ್ಕೇಶ್ 24 ಮತಗಳನ್ನು ಪಡೆದರೆ, ಚಿನ್ನಿಗಿರಿಗೌಡ 20 ಮತಗಳನ್ನ ಪಡೆದು ಗೆಲುವು ಸಾಧಿಸಿದರು.
ಖಜಾಂಚಿ ಸ್ಥಾನಕ್ಕೆ ಮೆಂಗಳ್ಳಿ ಮಹೇಶ್ 27 ಮತಗಳನ್ನು ಪಡೆದು ಜಯಗಳಿಸಿದರೆ, ನಿರ್ದೇಶಕ ಸ್ಥಾನಕ್ಕೆ ಎಂಟು ಸ್ಥಾನಗಳಲ್ಲಿ ಇಬ್ಬರು ಅಭ್ಯರ್ಥಿಗಳು ಮಾತ್ರ ಸ್ಪರ್ಧೆ ಮಾಡಿದ್ದು, ಟಿವಿ 9 ಕ್ಯಾಮರಾಮೆನ್ ಸಂದೀಪ್, ಹಾಗೂ ಪ್ರಜಾಸಂದೇಶ ಪತ್ರಿಕೆಯ ಕುಮಾರ್ ಅವಿರೋಧ ಆಯ್ಕೆಯಾದರು.
ಮುಖ್ಯ ಚುನಾವಣಾ ಅಧಿಕಾರಿಯಾಗಿ ಓದೇಶ್ ಸಕಲೇಶಪುರ, ಸಹಾಯಕ ಚುನಾವಣಾ ಅಧಿಕಾರಿಯಾಗಿ ಶಿವರಾಜು, ಸಿದ್ಧಲಿಂಗೇಶ್ವರ ಅವರು ಕರ್ತವ್ಯ ನಿರ್ವಹಿಸಿದರು. ಮತ ಏಣಿಕೆ ಪ್ರಕ್ರಿಯೆ ಬಳಿಕ ನೂತನ ಅಧ್ಯಕ್ಷರು, ಪದಾಧಿಕಾರಿಗಳಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ವಿಭೂತಿಕೆರೆ ಶಿವಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಎಸ್. ಮಂಜುನಾಥ್ ವಿಜೇತ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ಚನ್ನಪಟ್ಟಣ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಎಂ.ಮಂಜುನಾಥ್ ತಮ್ಮ ಆಯ್ಕೆಗೆ ಶ್ರಮಿಸಿದ ಹಿರಿಯ ಪತ್ರಕರ್ತರು, ಸಹವರದಿಗಾರರು ಹಾಗೂ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.ತಾಲ್ಲೂಕು ಪತ್ರಕರ್ತರ ಭವನ ಜತೆಗೆ ಪತ್ರಕರ್ತರಿಗೆ ನಿವೇಶನ ಕೊಡಿಸುವ ಗುರಿ ಹೊಂದಿದ್ದೇನೆ. ಆದ್ದರಿಂದ ಎಲ್ಲಾ ನನ್ನ ಪತ್ರಿಕಾ ಮಿತ್ರರು ತಾಲ್ಲೂಕು ಸಂಘದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಲು ಸಹಕರಿಸಬೇಕಾಗಿ ಇದೇ ವೇಳೆ ತಿಳಿಸಿದರು. ಇದೇ ವೇಳೆ ಜಿಲ್ಲೆಯ ಹಾಗೂ ತಾಲ್ಲೂಕಿನ ಹಲವಾರು ಪತ್ರಕರ್ತರು ಹಾಜರಿದ್ದರು.
ಅಭಿನಂಧನೆಗಳು: ಚನ್ನಪಟ್ಟಣ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅಧ್ಯಕ್ಷರಾಗಿ ಡಿ.ಎಂ.ಮಂಜುನಾಥ್ ಆಯ್ಕೆಯಾಗುತ್ತಿದ್ದಂತೆ ಹಲವಾರು ಮುಖಂಡರು, ಸಂಘ-ಸಂಸ್ಥೆಗಳ ಮುಖಂಡರು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದರು.

