ಬೆಳಗಾವಿ: ಖಾತೆ ವಿಲೇವಾರಿಗೆ ತಂದಿದ್ದ ರೌಂಡ್ ರಾಬಿನ್ ಪದ್ಧತಿಯನ್ನು ರದ್ದು ಮಾಡಲಾಗಿದೆ. ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತೆ ಹಂಚಿಕೆಗೆ 6,450 ಅರ್ಜಿಗಳು ಮಾತ್ರ ಬಾಕಿಯಿರುವ ಕಾರಣಕ್ಕೆ ಹಳೆ ಪದ್ಧತಿಯಲ್ಲಿಯೇ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಬೆಂಗಳೂರು ನಗರದ ಎರಡು ಕಡೆ ವೈಜ್ಞಾನಿಕ ಕಸ ವಿಲೇವಾರಿ ಘಟಕಗಳು ಜಿಬಿಎ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸವನ್ನು ಸಂಸ್ಕರಿಸಲು ನಗರದ ಉತ್ತರ ಹಾಗೂ ದಕ್ಷಿಣ ದಿಕ್ಕುಗಳಲ್ಲಿ ಎರಡು ಘಟಕಗಳನ್ನು ಸ್ಥಾಪಿಸಲಾಗುವುದು. ಹೊಸ ತಂತ್ರಜ್ಞಾನದ ಮೂಲಕ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು.
ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಈ ಹಿಂದೆ ಮುಚ್ಚಿರುವ ಕಸ ಸಂಗ್ರಹಗಾರವನ್ನ ಸ್ಥಳಾಂತರಿಸಬೇಕು ಎನ್ನುವ ಶಾಸಕ ಧೀರಜ್ ಮುನಿರಾಜು ಅವರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಅವರು, ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿ, ಗುಂದಲಹಳ್ಳಿಯಲ್ಲಿ ಒಟ್ಟು 134.10 ಎಕರೆ ಹಾಗೂ ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿಯ ಗೊಲ್ಲಹಳ್ಳಿಯಲ್ಲಿ 84.14 ಎಕರೆ ಹಾಗೂ 31.14 ಎಕರೆ ಪ್ರದೇಶವನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದರು.
ವಿಧಾನಸಭೆ ಪ್ರಶ್ನೋತ್ತರ ಕಲಾಪದ ವೇಳೆ ಶಾಸಕ ಗೋಪಾಲಯ್ಯ ಅವರು ಜಿಬಿಎ ವ್ಯಾಪ್ತಿಯಲ್ಲಿ ಇ ಖಾತೆಗಳನ್ನು ನೀಡಲು ತಂದಿರುವ ರೌಂಡ್ ರಾಬಿನ್ ಪದ್ದತಿಯಿಂದ ಅನಾನುಕೂಲವಾಗುತ್ತಿರುವುದು ಗಮನಕ್ಕೆ ಬಂದಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಇ ಖಾತೆ ಯೋಜನೆಯಡಿ ಜಿಬಿಎ ವ್ಯಾಪ್ತಿಯಲ್ಲಿ ಒಟ್ಟು 43,382 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇವುಗಳಲ್ಲಿ 31,274 ಅರ್ಜಿಗಳನ್ನು ವಿಲೇ ಮಾಡಲಾಗಿದೆ. 5,448 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದರು.
ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 26 ಎಕರೆ ಪ್ರದೇಶದಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಘಟಕವನ್ನು ಪ್ರಾರಂಭ ಮಾಡಲಾಗಿದೆ. ನಗರದ ನಾಲ್ಕು ಭಾಗದಲ್ಲೂ ವೈಜ್ಞಾನಿಕ ಕಸ ವಿಲೇವಾರಿ ಮಾಡಬೇಕು ಎಂದು ಪ್ರಯತ್ನ ಮಾಡುತ್ತಿರುವೆ. ಕಸದಿಂದ ಗ್ಯಾಸ್, ಬಯೋ ಗ್ಯಾಸ್ ಉತ್ಪಾದನೆ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದೇವೆ” ಎಂದರು.
ಕಸ ವಿಲೇವಾರಿ ಘಟಕ ಮತ್ತೆ ತೆರೆದರೆ ಜನರ ವಿರೋಧಕ್ಕೆ ಕಾರಣವಾಗುತ್ತದೆ ಎಂದು ಶಾಸಕ ಧೀರಜ್ ಮುನಿರಾಜು ಅವರು ಹೇಳಿದಾಗ, “ಈಗ ತಂತ್ರಜ್ಞಾನ ಮುಂದುವರೆದಿದೆ. ಜನರಿಗೆ ಮನವರಿಕೆ ಮಾಡಿ ನಾನು ಬರುತ್ತೇನೆ. ಈ ಘಟಕಗಳನ್ನು ನಗರದ ನಾಲ್ಕೈದು ಕಡೆ ಮಾಡುತ್ತೇವೆ. ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಇದೇ ರೀತಿಯ ಘಟಕವನ್ನು ನಾನು ಕನಕಪುರದಲ್ಲಿಯೂ ತೆರೆಯಲು ಹೊರಟಿದ್ದೇನೆ. ಬಿಡದಿಯಲ್ಲಿಯೂ ಮಾಡುತ್ತಿದ್ದೇವೆ, ನಗರದ ಒಳಭಾಗದಲ್ಲಿ, ದಾಸರಹಳ್ಳಿ, ರಾಮಲಿಂಗಾರೆಡ್ಡಿ ಅವರ ಕ್ಷೇತ್ರದಲ್ಲಿಯೂ ಸಣ್ಣ ಪ್ರಮಾಣದಲ್ಲಿ ಕೆಲಸ ಮಾಡಲಾಗುತ್ತಿದೆ” ಎಂದರು.
ಬೆಂಗಳೂರಿನ ಸುತ್ತಲಿನ ಪ್ರದೇಶದ ಕಸ ಸೇರಿ 2,500 ಟನ್ ಸೇರಿ ನಗರದಲ್ಲಿ 8 ಸಾವಿರ ಟನ್ ಕಸ ಉತ್ಪಾದನೆಯಾಗುತ್ತದೆ ಇದನ್ನು ಎಲ್ಲಿ ಹಾಕುವುದು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಮಂಗಳೂರಿನಲ್ಲಿ ರೇಷ್ಮೆ ಹುಳ ಮಾದರಿಯ ಬ್ಲಾಕ್ ಸೋಲ್ಜರ್ ಫ್ಲೈ ಬಳಸಿಕೊಂಡು ಕಸವನ್ನು ಗೊಬ್ಬರ ಮಾಡಲಾಗಿದೆ. ಇದು ಕಸವನ್ನು ತಿಂದು ಗೊಬ್ಬರ ಮಾಡುತ್ತದೆ. ಈ ಪ್ರಯೋಗವನ್ನು ಬೆಂಗಳೂರಿನಲ್ಲೂ ಪ್ರಯೋಗಿಸಲಾಗಿವುದು. ಇದರ ಬಗ್ಗೆ ಪ್ರಧಾನಿ ಮೋದಿಯವರು ಸಹ ಎಕ್ಸ್ ಮಾಡಿದ್ದರು” ಎಂದರು.

