ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಬಡವರಿಗೆ ಆರೋಗ್ಯ ಸೇವೆಗಳು ಸಿಗುತ್ತಿಲ್ಲ, ರಾಜ್ಯಾದ್ಯಂತ 7 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಮುಚ್ಚಿದ್ದು ಮಕ್ಕಳ ಶಿಕ್ಷಣಕ್ಕೆ ಆಪತ್ತು ಬಂದಿದೆ ನಿಖಿಲ್ ಕುಮಾರಸ್ವಾಮಿ ಅವರು ಆರೋಪಿಸಿದರು.
ಬೆಂಗಳೂರಿನಲ್ಲಿ ಕೋರ್ ಕಮಿಟಿ ಸಭೆಯ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು; ಬ್ರೇಕ್ ಫಾಸ್ಟ್‌ಗೆ ಇಡ್ಲಿ, ಮಧ್ಯಾಹ್ನ ನಾಟಿ ಕೋಳಿ, ಡಿನ್ನರ್‌ಗೆ ಬೆಳ್ಳುಳ್ಳಿ ಕಬಾಬ್ ಬರುತ್ತೆನೋ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಯಾವುದು ಸರಿಯಿಲ್ಲ. ಸರಿ ಇದ್ದರೆ ಆಡಳಿತದಲ್ಲಿ ತೋರಿಸಿ. ಅದು ಬಿಟ್ಟು ಈ ಬ್ರೇಕ್‌ಫಾಸ್ಟ್ ಮೀಟಿಂಗ್, ಡಿನ್ನರ್ ಮೀಟಿಂಗ್ ಯಾಕೆ ಮಾಡಬೇಕು. ರಾಜ್ಯದಲ್ಲಿ ಉಪಹಾರ ಇಲಾಖೆ ಮಾತ್ರ ಸಕ್ರಿಯವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಅರೋಗ್ಯ ಇಲಾಖೆಯಲ್ಲಿ ಗರ್ಭಿಣಿಯರು ಸೇರಿ ಮಕ್ಕಳು ಎಷ್ಟು ಬಲಿಯಾದರು. ಅರೋಗ್ಯ ಇಲಾಖೆ ರಾಜ್ಯದಲ್ಲಿ ಸಂಪೂರ್ಣ ಕುಸಿದಿದೆ. ಅರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ವೈಫಲ್ಯವಾಗಿದೆ. ರಾಜ್ಯದಲ್ಲಿ ಸರ್ಕಾರಿ ಶಾಲೆ ಮುಚ್ಚುತ್ತಿವೆ. ಶಿಕ್ಷಕರ ನೇಮಕಾತಿ ಆಗ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಎಂ.ಕೃಷ್ಣಾರೆಡ್ಡಿ ಅವರು ಅಧ್ಯಕ್ಷತೆಯಲ್ಲಿ ಇಂದು ಮೊದಲ ಕೋರ್ ಕಮಿಟಿ ಸಭೆ ನಡೆಸಿದರು. ಸಭೆಯಲ್ಲಿ ಪಕ್ಷ ಸಂಘಟನೆ ಮತ್ತು ಬಲವರ್ಧನೆ ಹಾಗೂ ಮುಂಬರುವ ಜಿಬಿಎ ಹಾಗೂ ಸ್ಥಳೀಯರ ಸಂಸ್ಥೆಗಳ ಚುನಾವಣೆಗೆ ತಯಾರಿ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಯಿತು.
ಕೋರ್ ಕಮಿಟಿ ಸದಸ್ಯರಾಎ ಮಂಜು, ಹೆಚ್.ಕೆ ಕುಮಾರಸ್ವಾಮಿ, ನೇಮಿರಾಜ್ ನಾಯ್ಕ್, ಕರೆಮ್ಮ ನಾಯಕ್, ತಿಪ್ಪೇಸ್ವಾಮಿ, ದೊಡ್ಡಗೌಡ ಪಾಟೀಲ್, ಪ್ರಸನ್ನಕುಮಾರ್, ಎ ಮಂಜುನಾಥ್, ಇಂಚರ ಗೋವಿಂದ್ ರಾಜ್, ಸಿ.ವಿ ಚಂದ್ರಶೇಖರ್, ರಾಜ ವೆಂಕಟಪ್ಪ ನಾಯಕ್, ತಿಮ್ಮರಾಯಪ್ಪ ಅವರು ಭಾಗಿಯಾಗಿದ್ದರು.

