ಬೆಂಗಳೂರು ಸುತ್ತಿ, ಗವಿಗಂಗಾಧರೇಶ್ವರ ದರ್ಶನ ಪಡೆದ ಭಾರತದಲ್ಲಿನ ಅಮೆರಿಕ ರಾಯಭಾರಿ..!

ಬೆಂಗಳೂರು: ಭಾರತದಲ್ಲಿರುವ ಅಮೆರಿಕದ ರಾಯಭಾರಿ ಎಚ್‌.ಇ. ಸರ್ಜಿಯೊ ಗೋರ್‌, ಬೆಂಗಳೂರು ಸುತ್ತಿ, ಗವಿಗಂಗಾಧರೇಶ್ವರ ದರ್ಶನ ಪಡೆದಿದ್ದು, ಬೆಂಗಳೂರಿನ ಭೇಟಿ, ಆನಂದವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗೋರ್‌ ಅವರ ನಗರ ಸುತ್ತಾಟಕ್ಕೆ ಸಂಸದ ತೇಜಸ್ವಿ ಸೂರ್ಯ ಸಹಭಾಗಿಯಾಗಿದ್ದು, ಈ ಕುರಿತು ತೇಜಸ್ವಿ ಸೂರ್ಯ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಪೋಟೊ, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ರಾಯಭಾರಿ ಗೋರ್‌ ಅವರು ತಡರಾತ್ರಿ ತೇಜಸ್ವಿಸೂರ್ಯ ಜತೆಗೆ ಆಟೋದಲ್ಲಿ ಸುತ್ತಾಡಿದ್ದಾರೆ. ಅಲ್ಲದೆ, ಇಂದಿರಾನಗರದ ಫಿಲ್ಟರ್‌ ಕಾಫಿಯಲ್ಲಿ ಮಸಾಲ ದೋಸೆ, ಇಡ್ಲಿ ಮತ್ತು ಕಾಫಿ ಆಸ್ವಾದಿಸಿ ಖುಷಿಪಟ್ಟಿದ್ದಾರೆ. ಬಳಿಕ ಮಂಗಳವಾರ ಬೆಂಗಳೂರಿನ ಐತಿಹಾಸಿಕ ಗವಿಗಂಗಾಧರೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಿದ್ದಾರೆ.

ಈ ಕುರಿತು ಸೋಮವಾರ ‘ಎಕ್ಸ್‌’ ಖಾತೆಯಲ್ಲಿ ಬರೆದುಕೊಂಡಿರುವ ತೇಜಸ್ವಿ ಸೂರ್ಯ, ”ರಾಯಭಾರಿ ಎಚ್‌.ಇ.ಸರ್ಜಿಯೊ ಗೋರ್‌ ಅವರನ್ನು ಬೆಂಗಳೂರಿಗೆ ಸ್ವಾಗತಿಸಿ, ಅವರಿಗೆ ಇಂದಿರಾನಗರದಲ್ಲಿ ಮಸಾಲ ದೋಸೆ ಮತ್ತು ಕಾಫಿ ಕೊಡಿಸಿದ್ದೇನೆ. ಈ ವೇಳೆ ವ್ಯಾಪಾರ, ತಂತ್ರಜ್ಞಾನ, ನಾವೀನ್ಯತೆಯಲ್ಲಿ ಯುಎಸ್‌ ಮತ್ತು ಭಾರತ ಸಹಭಾಗಿತ್ವ ಮತ್ತು ಇತ್ತೀಚೆಗೆ ಅಂತಿಮಗೊಂಡ ಮಧ್ಯಂತರ ವ್ಯಾಪಾರ ಒಪ್ಪಂದದ ಹಿನ್ನೆಲೆಯಲ್ಲಿ ಮಾತನಾಡಿದೆವು. ಅವರಿಗೆ ನಮ್ಮ ಆಟೋ ಪ್ರಯಾಣವನ್ನು ಪರಿಚಯಿಸಿದೆ. ಇದು ಸ್ಮರಣೀಯ ಸವಾರಿ,” ಎಂದು ಹಂಚಿಕೊಂಡಿದ್ದಾರೆ.

ಅಷ್ಟು ಮಾತ್ರವಲ್ಲದೆ ಮಂಗಳವಾರ ಸಹ ತಮ್ಮ ಎಕ್ಸ್ ಖಾತೆಯಲ್ಲಿ ಈ ಖಾತೆಯನ್ನು ನೆನಪಿಸಿಕೊಂಡಿರುವ ತೇಜಸ್ವಿ ಸೂರ್ಯ ಅವರು, “ನಿನ್ನೆ ನಮ್ಮ ಸಂಭಾಷಣೆಯ ಸಮಯದಲ್ಲಿ, ಸೆರ್ಗಿಯೊ ಗೋರ್ ಅವರು ಜಾಗತಿಕ ತಂತ್ರಜ್ಞಾನ ಕೇಂದ್ರವಾಗಿ ಬೆಂಗಳೂರಿನ ಗುರುತನ್ನು ಮೀರಿದ ಕಾಲಾತೀತ, ಸಾಂಪ್ರದಾಯಿಕ ಆತ್ಮವನ್ನು ಕಂಡುಕೊಳ್ಳಲು ಉತ್ಸುಕರಾಗಿದ್ದರು. ಹೀಗಾಗಿ ಬೆಂಗಳೂರಿನ ಸಂಸ್ಥಾಪಕ ಕೆಂಪೇಗೌಡರು 16 ನೇ ಶತಮಾನದಲ್ಲಿ ನಿರ್ಮಿಸಿದ್ದ ಬಸವನಗುಡಿಯಲ್ಲಿರುವ ಗವಿ ಗಂಗಾಧರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವಂತೆ ಸೂಚಿಸಿದೆ. ಬೆಂಗಳೂರಿನ ಶ್ರೀಮಂತ ಸಂಪ್ರದಾಯಗಳ ನಿರಂತರ ಚೈತನ್ಯಕ್ಕೆ ಗೌರವ ಸಲ್ಲಿಸಿದ ಸೆರ್ಗಿಯೊ ಅವರ ಉದಾತ್ತತೆ ಪ್ರಶಂಸನೀಯ ಎಂದು ತಿಳಿಸಿದ್ದಾರೆ.

ಸರ್ಜಿಯೊ ಗೋರ್‌ ಕೂಡ ತಮ್ಮ ‘ಎಕ್ಸ್‌’ ಖಾತೆಯಲ್ಲಿ, ”ಬೆಂಗಳೂರಿಗೆ ಈಗಷ್ಟೇ ಬಂದೆ! ಸ್ಟಾರ್ಟಪ್‌ಗಳಿಂದ ಹಿಡಿದು ಸ್ಟ್ರೀಟ್‌ ಫುಡ್‌ವರೆಗೂ, ಬೆಂಗಳೂರಿನ ಶಕ್ತಿಗೆ ಸಾಟಿಯಿಲ್ಲ!” ಎಂದು ಬರೆದುಕೊಂಡು, ತೇಜಸ್ವಿ ಸೂರ್ಯ ಅವರಿಗೆ ಧನ್ಯವಾದ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಭೇಟಿ
ರಾಯಭಾರಿ ಗೋರ್ ಅವರು ಸೋಮವಾರದಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಹ ಭೇಟಿ ಮಾಡಿ ಕೆಲ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆಯೂ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ` ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಖುಷಿ ಆಯಿತು. ಬೆಂಗಳೂರಿನಲ್ಲಿ ಅಮೆರಿಕದ ಪಾಲುದಾರಿಕೆಯ ಬಲ ಮತ್ತು AI ಮತ್ತು ಉದಯೋನ್ಮುಖ ತಂತ್ರಜ್ಞಾನದ ಭರವಸೆಯ ಬಗ್ಗೆ ನಾವು ಚರ್ಚಿಸಿದ್ದೇವೆ. ಕರ್ನಾಟಕ ರಾಜ್ಯವು 700 ಕ್ಕೂ ಹೆಚ್ಚು ಅಮೇರಿಕನ್ ಕಂಪನಿಗಳನ್ನು ಹೊಂದಿದೆ! ಇದು ಅರ್ಥಪೂರ್ಣ ಭೇಟಿ’ ಎಂದು ಬರೆದಿದ್ದಾರೆ.

Leave a Reply

Your email address will not be published. Required fields are marked *