ಬೆಂಗಳೂರು, ಸಿಎಂ ಸಿದ್ದರಾಮಯ್ಯ ಮತ್ತು ತಾವು ಸಹೋದರರಂತಿದ್ದೇವೆ. ನಮಲ್ಲಿ ಯಾವುದೇ ಗುಂಪುಗಾರಿಕೆಯಾಗಲಿ, ಬಣಗಳಾಗಲಿ ಇಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಂಗಲ್ ಹನುಮಂತಯ್ಯ ನವರ ಪುಣ್ಯಸರಣೆ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಹುಟ್ಟುವಾಗ ಒಬ್ಬರೇ ಸಾಯುವಾಗಲು ಒಬ್ಬರೇ ರಾಜಕೀಯ, ಪಕ್ಷ ಎಂದ ಮೇಲೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದರು.
ಕೇಂದ್ರದ ವಿರುದ್ಧ ಆಕ್ರೋಶ:
ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ನ್ಯಾಷನಲ್ ಹೆರಾಲ್‌್ಡ ಕುರಿತಂತೆ ಮತ್ತೊಂದು ಪ್ರಕರಣ ದಾಖಲಿಸಿರುವುದು ಅನ್ಯಾಯದ ಪರಮಾವಧಿ. ಕಿರುಕುಳಕ್ಕೂ ಒಂದು ಮಿತಿ ಇದೆ. ಪ್ರಕರಣ ದಾಖಲಿಸುವ ಅಗತ್ಯ ಇರಲಿಲ್ಲ, ಇದು ಖಂಡನೀಯ. ಇಂತಹ ಕಿರುಕುಳ ಅಗತ್ಯವೇ ಇರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಷನಲ್ ಹೆರಾಲ್ಡ್ ಸಂಸ್ಥೆಯ ಶೇರುಗಳಿಗೆ ಹಿಂದೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಜವಾಬ್ದಾರರು ಎಂದು ಹೇಳಿದರು.
ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನೇಕ ಸರ್ಕಾರದ ಸಂಸ್ಥೆಗಳಿಗೆ ಮುಖ್ಯಸ್ಥರಾಗಿದ್ದೇವೆ. ಮುಖ್ಯಮಂತ್ರಿಯವರು ಕರ್ನಾಟಕ ವಿದ್ಯುತ್ ನಿಗಮಕ್ಕೆ ಅಧ್ಯಕ್ಷರಾಗಿದ್ದರೆ, ನಾನು ನೀರಾವರಿ ನಿಗಮಗಳಿಗೆ ಅಧ್ಯಕ್ಷನಾಗಿದ್ದೇನೆ. ನಾವು ಅಧ್ಯಕ್ಷ ಸ್ಥಾನ ಅಧಿಕಾರ ಬಿಟ್ಟು ಹೋಗುವಾಗ, ಅಲ್ಲಿನ ಹೊಣೆಗಾರಿಕೆಗಳೆಲ್ಲವೂ ಎಲ್ಲವೂ ವರ್ಗಾವಣೆಯಾಗಿರುತ್ತದೆ ಎಂದರು.
ಒಂದೆರಡು ಶೇರುಗಳು ನಮ ಹೆಸರುಗಳಲ್ಲಿ ಉಳಿದುಕೊಳ್ಳಬಹುದು. ಪಂಡಿತ್ ಜವಹಾರ್ ಲಾಲ್ ನೆಹರು ಅವರು ನ್ಯಾಷನಲ್ ಹೆರಾಲ್‌್ಡ ಪ್ರಕರಣದಲ್ಲಿ ಒಂದಷ್ಟು ಶೇರುಗಳನ್ನು ಉಳಿಸಿಕೊಂಡಿರಬಹುದು, ಅವು ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿಯ ಮೂಲಕ ವರ್ಗಾವಣೆಯಾಗಿ ಬಂದಿವೆ. ಎಲ್ಲವೂ ಪಾರದರ್ಶಕವಾಗಿದೆ ಎಂದರು.
ಯಂಗ್ ಇಂಡಿಯಾ ಮತ್ತು ನ್ಯಾಷನಲ್ ಹೆರಾಲ್‌್ಡ ಸಂಸ್ಥೆಗಳು ಕಾಂಗ್ರೆಸ್ ಪಕ್ಷದ ಸಂಸ್ಥೆಯ ಆಸ್ತಿ. ನ್ಯಾಷನಲ್ ಹೆರಾಲ್ಡ್ ಗಾಂಧಿ ಕುಟುಂಬದ ಆಸ್ತಿಯಲ್ಲ. ಗಾಂಧಿ ಕುಟುಂಬ ಇಲ್ಲದೆ ಕಾಂಗ್ರೆಸ್ ಪಕ್ಷ ಇಲ್ಲ. ಸೋನಿಯಾ ಗಾಂಧಿಯವರು ಪಕ್ಷದ ಅಧ್ಯಕ್ಷರಾಗಿದ್ದಾಗ ಶೇರುಗಳನ್ನು ಉಳಿಸಿಕೊಂಡಿರಬಹುದು. ಸೀತಾರಾಮ್ ಕೇಸರಿ ಅವರ ಬಳಿಕ ಸೋನಿಯಾ ಗಾಂಧಿಯವರು ಕಾಂಗ್ರೆಸ್ ಪಕ್ಷದ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡರು. ಅವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 10 ವರ್ಷ ಆಡಳಿತ ನಡೆಸಿದೆ ಎಂದರು.
ಕಾಂಗ್ರೆಸ್ ಪಕ್ಷವನ್ನು ಬೆದರಿಸಲು ರಾಜಕೀಯ ಕಿರುಕುಳ ನೀಡಲಾಗುತ್ತಿದೆ. ಇದಕ್ಕೆ ರಾಹುಲ್ ಗಾಂಧಿ ಹೆದುರಿಕೊಳ್ಳುವುದಿಲ್ಲ. ಕೇಂದ್ರ ಸರ್ಕಾರ ಅಸೂಯೆಯಿಂದ ತೆಗೆದುಕೊಳ್ಳುತ್ತಿರುವ ಕ್ರಮಗಳು ನಗಣ್ಯ. ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ ಅದನ್ನೆಲ್ಲ ಬಿಟ್ಟು ದ್ವೇಷದ ರಾಜಕಾರಣ ಮಾಡುತ್ತಿರುವುದು ಖಂಡನೀಯ. ಇಂತಹ ಕ್ರಮಗಳಿಂದ ಕಾಂಗ್ರೆಸ್ ಪಕ್ಷವನ್ನು ಹತ್ತಿಕ್ಕುವುದು ಸುಲಭ ಅಲ್ಲ. ರಾಜಕಾರಣದಲ್ಲಿ ಮುಖಾಮುಖಿಯಾಗಿ ಚುನಾವಣೆಯಲ್ಲಿ ಎದುರಿಸಬೇಕು ಎಂದು ಹೇಳಿದರು.

