ಗಾಳಿ ಆಂಜನೇಯ ಸ್ವಾಮಿ, ಭಕ್ತರ ಆರಾಧ್ಯ ದೈವ

ಗಾಳಿ ಆಂಜನೇಯ ಸ್ವಾಮಿ, ಭಕ್ತರ ಆರಾಧ್ಯ ದೈವ ಗಾಳಿ ಆಂಜನೇಯ ಸ್ವಾಮಿ, ಭಕ್ತರ ಆರಾಧ್ಯ ದೈವ

ಗಾಳಿ ಆಂಜನೇಯ ಸ್ವಾಮಿ, ಭಕ್ತರ ಆರಾಧ್ಯ ದೈವ

ವಿಶ್ವ ಭೂಪಟದಲ್ಲಿ ಹೆಸರು ವಾಸಿ ಆಗಿರುವ ಬೆಂಗಳೂರು ನಗರದ ಮೈಸೂರು ರಸ್ತೆಯಲ್ಲಿರುವ ಪ್ರತಿಷ್ಠಿತ ದೇವಲಾಯಗಳಲ್ಲಿ ಶ್ರೀ ಗಾಳಿ ಆಂಜನೇಯ ದೇವಸ್ಥಾನವೂ ಒಂದು. ನಾನಾ ಹೆಸರುಗಳಿಂದ ಕರೆಯಲ್ಪಡುವ ಹನುಮಂತ ವಾಯುಪುತ್ರನಾಗಿರುವುದರಿಂದ ಇಲ್ಲಿನ ಹನುಮ ದೇವಸ್ಥಾನಕ್ಕೆ ಗಾಳಿ ಆಂಜನೇಯ ಎಂಬ ಹೆಸರು ಬಂದಿದೆ. ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಭಕ್ತಿಯಿಂದ ದಿನನಿತ್ಯ ಪೂಜಿಸಲಾಗುತ್ತದೆ.

ಈ ದೇವಾಲಯವನ್ನು ಚೆನ್ನಪಟ್ಟಣದ ಶ್ರೀ ವ್ಯಾಸರಾಯರು 1425ರಲ್ಲಿ ಕಟ್ಟಿಸಿದ್ದರು ಎಂದು ಹೇಳಲಾಗುತ್ತಿದೆ. ದೇವಾಲಯದ ಮುಂದೆ ಸುಂದರ ಹಾಗೂ ಎತ್ತರವಾದ ಗೋಪುರವಿದೆ. ಈ ಕಲ್ಲು ಗೋಪುರದಲ್ಲಿ ಹಲವಾರು ದೇವತೆ ಹಾಗೂ ಮುದ್ರೆಗಳುಳ್ಳ ಉಬ್ಬು ಶಿಲ್ಪಗಳಿವೆ. ದೇವಾಲಯಕ್ಕೆ ಭವ್ಯವಾದ ಗೋಪುರವಿದ್ದು, ಒಳ ಪ್ರಾಕಾರದಲ್ಲಿಯೂ ವಿಶಾಲವಾದ ಗುಡಿಯಾಗಿದೆ. ಇಲ್ಲಿ ನವಗ್ರಹ, ಸತ್ಯನಾರಾಯಣ ಹಾಗೂ ಸೀತಾ ಲಕ್ಷ್ಮಣ ಸಹಿತನಾದ ಕಲ್ಯಾಣ ರಾಮನನ್ನು ಪ್ರತಿಷ್ಠಾಪಿಸಲಾಗಿದೆ. ವರ್ಷದಲ್ಲಿ ಎರಡು ಬಾರಿ ಇಲ್ಲಿ ಸ್ವಾಮಿಗೋ ಬ್ರಹ್ಮೋತ್ಸವ ಜರುಗುತ್ತದೆ. ಈ ಬ್ರಹ್ಮೋತ್ಸವನ್ನು 120 ವರ್ಷಗಳಿಂದಲೂ ನಡೆಸಿಕೊಂಡು ಬರಲಾಗುತ್ತಿದೆ.

ದೇವಾಲಯದಲ್ಲಿ ಪುರಾತನವಾದ ಗರ್ಭಗುಡಿಯಲ್ಲಿ ಒಂದು ಕರವನ್ನು ಮೇಲೆತ್ತಿ ಅಭಯ ನೀಡುತ್ತಿರುವ ಮತ್ತು ಮತ್ತೊಂದು ಕರದಲ್ಲಿ ಗದೆ ಹಿಡಿದ ಎದುರು ಮುಖದ ಆಂಜನೇಯನ ಸುಂದರ ಮೂರ್ತಿಯಿದೆ.

ಬಾಪೂಜಿನಗರಕ್ಕೆ ಸಂಪ್ರದಾಯದ ಸೊಗಡಿದೆ. ನಗರದ ಆಧುನಿಕತೆಗೆ ತೆರೆದುಕೊಂಡಿರುವ ಈ ಬಡಾವಣೆಯು ಬ್ರಹ್ಮೋತ್ಸವದ ವೇಳೆ ಹಳ್ಳಿಯ ವಾತಾವರಣಕ್ಕೆ ತಿರುಗುತ್ತದೆ. ವಾಹನದಟ್ಟಣೆ, ಏರುತ್ತಿರುವ ಜನಸಂಖ್ಯೆಯ ಹೊರತಾಗಿಯೂ ಅದು ಉಸಿರಾಡುವುದು ತನ್ನತನವನ್ನು. ಉಸಿರು ಎನ್ನಲು ಕಾರಣ ಅಲ್ಲಿನ ಗಾಳಿ ಆಂಜನೇಯ ಸ್ವಾಮಿ.ಈ ದೇವಾಲಯಕ್ಕೆ ಇದಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಇಲ್ಲಿ ನಿರಂತರವಾಗಿ ಸಾವಿರಾರು ಭಕ್ತಾದಿಗಳು ಪೂಜೆ ಸಲ್ಲಿಸುತ್ತಾರೆ.

ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದರಿಂದ ಮನೆಯಲ್ಲಿನ ಕಷ್ಟಗಳು ದೂರಾಗುತ್ತವೆ ಹಾಗೂ ಮನೆಯಲ್ಲಿ ದುಷ್ಟಶಕ್ತಿಗಳು ಸುಳಿಯುವುದಿಲ್ಲ, ಮಕ್ಕಳು ಚಂಡಿ ಹಿಡಿದರೆ ದೇವಸ್ಥಾನಕ್ಕೆ ಭೇಟಿ ನೀಡಿ ತಾಯತ ಹಾಕಿಸಿಕೊಳ್ಳುವುದರಿಂದ ಮಕ್ಕಳಲ್ಲಿರುವ ಗೊಂದಲ ಹಾಗೂ ತೊಂದರೆಗಳು ಇಲ್ಲವಾದಂತೆ ಆಗುತ್ತದೆ. ಈ ಆಂಜನೇಯನನ್ನು ಪ್ರಾರ್ಥಿಸುವುದರಿಂದ ಗಾಳಿ ಹಿಡಿಯುವುದು ಅಂದರೆ ಭೂತ ಪಿಶಾಚಿಗಳ ಮುಷ್ಟಿಗೆ ಒಳಪಡುವುದರಿಂದ ಮುಕ್ತಿ ಪಡೆಯಬಹುದು ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.

Leave a Reply

Your email address will not be published. Required fields are marked *